ಯೇತಿ
ಹಿಮಾಲಯ ಪರ್ವತಗಳ 3000-6000 ಮೀ. ಎತ್ತರದ ಅಂದರೆ ಹಿಮರೇಖೆಯ ಪ್ರದೇಶದಲ್ಲಿ ವಾಸಮಾಡುತ್ತದೆ ಎನ್ನಲಾದ ಎಂದು ನಿಗೂಢ ಬಗೆಯ, ರಾಕ್ಷಸಾಕಾರದ ಮಾನವರೂಪದ ಪ್ರಾಣಿ. ಇದೊಂದು ರೀತಿಯ ಹಿಮಮಾನವ. ಆಧುನಿಕ ಮಾನವನ ಪೂರ್ವಜ ಎಂಬ ಹೇಳಿಕೆಯೂ ಇದೆ. ಈ ತನಕ ಯಾರೂ ಇದನ್ನು ಜೀವಂತವಾಗಿಯಾಗಲೀ ಕಳೇಬರದ ರೂಪದಲ್ಲಾಗಲೀ ಕಂಡಿಲ್ಲ. ಆದರೆ ಇದು ಆ ಉನ್ನತಪ್ರದೇಶಗಳಲ್ಲಿ ಹಿಮದ ಮೇಲೆ ನಡೆದಾಡುತ್ತದೆಂದು ನೇಪಾಲ ಮತ್ತಿತರ ಭಾಗಗಳಲ್ಲಿ ವಾಸಿಸುವ ಶೆರ್ಪ ಜನ ನಂಬುತ್ತಾರೆ. ಯೇತಿಯ ಪಾದದಿಂದ ಉಂಟಾದವೆಂದು ಹೇಳಲಾಗುವ ಸುಮಾರು 30 ಸೆಂ.ಮೀ. ಉದ್ದ ಹಾಗೂ 15 ಸೆಂ.ಮೀ. ಅಗಲದ ದೈತ್ಯಗುರುತುಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ಆದರೆ ಈ ಗುರುತುಗಳು ಶಿಖರಗಳಿಂದ ಉರುಳಿ ಬೀಳುವ ಮಂಜುಗಡ್ಡೆಗಳಿಂದಲೊ ಕಲ್ಲುಗಳಿಂದಲೊ ಇಲ್ಲವೆ ಹಿಮಕರಡಿಗಳ ಹೆಜ್ಜೆಗಳಿಂದಲೊ ಉಂಟಾದವೆಂಬ ಅಭಿಪ್ರಾಯ ಇದೆ. ಯೇತಿಯ ಇರವನ್ನು ಬಲವಾಗಿ ನಂಬುವ ಶೆರ್ಪಗಳು ಇದರ ಬಗ್ಗೆ ಹಲವಾರು ಕತೆಗಳನ್ನು ಹೆಣೆದಿದ್ದಾರಲ್ಲದೆ ಯೇತಿಯದೆ ಎನ್ನಲಾದ ಕೂದುಲು, ಚರ್ಮ, ಮುಂತಾದ ವಸ್ತುಗಳನ್ನು ತೋರಿಸುತ್ತಾರೆ. ಆದರೆ ಇವು ಕರಡಿ, ಯಾಕ್, ಆಡಿನಂತೆ ಕಾಣುವ ಸೆರೋ ಎಂಬ ಪ್ರಾಣಿಗಳ ಕೂದಲುಗಳೆಂದು ಗೊತ್ತಾಗಿದೆ.

	ಯೇತಿಯ ಬಗ್ಗೆ ಮೊದಲ ಸುದ್ದಿ ದೊರೆತಿದ್ದು 1889 ರಲ್ಲಿ; ಕರ್ನಲ್ ಎಲ್.ಎ.ವ್ಯಾಡಲ್ ಎಂಬುವನಿಂದ. 1921ರ ಎವರೆಸ್ಟ್ ಯಾತ್ರೆಯ ಸಂದರ್ಭದಲ್ಲಿ ಶೆರ್ಪಗಳು ಬಳಿಸಿದ ಈ ಪದವನ್ನು ಹೆನ್ರಿ ನ್ಯೂಮನ್ ಎಂಬಾತ `ಅಬಾಮಿನಬಲ್ ಸ್ನೋಮ್ಯಾನ್ ಎಂದು ಅನುವಾದಿಸಿ ಪ್ರಪಂಚಕ್ಕೆ ಪರಿಚಯಿಸಿದ. ಅಲ್ಲಿಂದೀಚೆಗೆ ಯೇತಿಯ ಇರವಿನ ಬಗ್ಗೆ ನಡೆಸಿದ ಶೋಧಯತ್ನಗಳು ಯಾವುದೇ ರೀತಿಯಲ್ಲಿ ಫಲಪ್ರದವಾಗಿಲ್ಲ.	
										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ